ಭಾನುವಾರ, ಜುಲೈ 10, 2011

ಬಸವ ತತ್ವದ ದಂಡನಾಯಕರು : ಇಳಕಲ್ಲಿನ ಶ್ರೀ ಮಹಾಂತಶಿವಯೋಗಿಗಳು


ಕಲ್ಯಾಣ ನಾಡಿನ ಶರಣ ಸಮ್ಮೇಳನದ ವೇದಿಕೆಯ. ಮೇಲೆ ಚಿತ್ರದುರ್ಗದ ಇಂದಿನ ಡಾ.ಶಿವಮೂರ್ತಿ ಶರಣರು, ಇಳಕಲ್ಲಿನ ಚಿತ್ತರಗಿ ಮಹಾಂತಶಿವಯೋಗಿಗಳು, ಭಾಲ್ಕಿಯ ಶ್ರೀ ಚೆನ್ನಬಸವ ಪಟ್ಟದ್ದೇವರು, ಹುಲಸೂರಿನ ಭಾತಂಬ್ರದ ಸ್ವಾಮಿಗಳಲ್ಲದೆ ಹಲವಾರು ಜನ ಮಠಾಧೀಶರುಗಳು ; ಸ್ವಾಮಿ ಅಗ್ನಿವೇಶ್, ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯ ಮುಂತಾದ ವಿಚಾರವಾದಿಗಳು ಕುಳಿತುಕೊಂಡಿದ್ದರು. ರಾಮವಿಲಾಸ್ ಪಾಸ್ವಾನ್ ಎಂಬ ಮಾಜಿ ಕೇಂದ್ರ ಸಚಿವರು ಬಸವಣ್ಣನವರನ್ನು ಕುರಿತು ಓತಪ್ರೋತವಾಗಿ ಮಾತನಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ಆ ದಿನಗಳನ್ನು ನೆನಪಿಸುತ್ತ ಸಭೆಗೆ ಸಭೆಯನ್ನೆ ಮಂತ್ರಮುಗ್ಧವಾಗುವಂತೆ ಮಾಡಿದರು. ಬಸವಾದಿ ಶರಣರ ವಿಚಾರಗಳನ್ನು ರಾಮವಿಲಾಸ್ ಪಾಸ್ವಾನ್ ಎಷ್ಟು ಚೆನ್ನಾಗಿ ಓದಿ, ಅರ್ಥೈಸಿಕೊಂಡಿದ್ದಾರಲ್ಲ ! ಎಂದು ಅಲ್ಲಿರುವ ಎಲ್ಲರೂ ಬೆರಗುಗೊಂಡಿದ್ದರು. ಒಡನೆಯೆ ಅದೇನನ್ನಿಸಿತೋ, ”ಬಸವಣ್ಣನವರ ಅನುಯಾಯಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಯಾರೂ ಇಂದಿಗೂ ಬಸವಣ್ಣನವರಂತೆ ನಡೆದುಕೊಂಡಿಲ್ಲ. ಸ್ವಾಮಿ, ಜಗದ್ಗುರುಗಳೆಂಬುವವರಂತೂ ಶರಣರ ಜೀವನದ ಬಹುಮುಖ್ಯ ದ್ರವ್ಯವಾದ ಅಸ್ಪೃಶ್ಯತೆಯನ್ನು ತಮ್ಮ ಮಠಗಳಲ್ಲಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ” ಎಂದು ನೇರವಾಗಿ ಸ್ವಾಮಿಗಳನ್ನು ತರಾಟೆಗೆ ತೆಗೆದುಕೊಂಡರು.
ವೇದಿಕೆಯ ಮೇಲೆ ಆಸೀನರಾಗಿರುವ ಮಠಾಧೀಶರನ್ನು ನೋಡುತ್ತ : ”ಬಸವಣ್ಣನವರ ಆದರ್ಶಗಳನ್ನು ಇಂಥ ಸಭೆಗಳ ಮೂಲಕ ಪುಂಖಾನುಪುಂಖವಾಗಿ ಹೇಳುತ್ತಿರಲ್ಲ, ನೀವು ಎಂದಾದರೂ ನಿಮ್ಮ ಮಠಗಳಿಗೆ ಉತ್ತರಾಧಿಕಾರಿಯಾಗಿ ದಲಿತ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಾ? ಹೋಗಲಿ, ಇನ್ನು ಮುಂದಾದರೂ ನೀವು ನಿಮ್ಮ ಪೀಠಗಳಿಗೆ ದಲಿತರನ್ನು ನೇಮಿಸಿಕೊಳ್ಳುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದರು. ಅದುವರೆಗೆ ಮಹಾಜನ್ ಅವರ ಮಾತುಗಳನ್ನು ಕೇಳುತ್ತ ಆನಂದ ತುಂದಿಲರಾಗಿದ್ದ ಬಹುತೇಕ ಲಿಂಗಾಯತ ಮಠಾಧೀಶರ ಮುಖಗಳು ಒಮ್ಮಿದೊಮ್ಮೆ ಕಳಾಹೀನವಾದವು. ಒಬ್ಬರ ಮುಖ ಒಬ್ಬರು ಮಿಕಿಮಿಕಿ ನೋಡುತ್ತ ಅನಿರೀಕ್ಷಿತವಾಗಿ ಬಂದ ಪಾಸ್ವಾನ್ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದವು. ಅಲ್ಲಿ ಸೇರಿದ್ದ ಜನವಂತೂ ಉಸಿರನ್ನು ಬಿಗಿಹಿಡಿದು ಮುಂದೆ ಸಭೆ ಯಾವುದರ ಕಡೆ ತಿರುಗಬಹುದು ? ಎಂಬ ಕುತೂಹಲದಿಂದ ಕಾದುಕುಳಿತಿದ್ದರು.
ದಟ್ಟವಾದ ಆತಂಕ ಹಾಗೂ ನಿಶಬ್ದವನ್ನು ಸೀಳಿ ಬಂದಂತೆ ಇಳಕಲ್ಲಿನ ಮಹಾಂತಶಿವಯೋಗಿಗಳು ಎದ್ದು ನಿಂತರು. ”ನಮ್ಮ ಚಿತ್ತರಗಿ ಇಳಕಲ್ಲಿನ ಪೀಠಕ್ಕೆ ದಲಿತ ಮೂಲದ ಬಸವಾಯತನನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಆಗ ಸಭೆಯಲ್ಲಿ ನೆರೆದಿದ್ದ ಬಸವಣ್ಣನವರ ಅನುಯಾಯಿಗಳು ಅತ್ಯಂತ ಖುಷಿಯಿಂದ ಚಪ್ಪಾಳೆ ತಟ್ಟಿದರು. ಮಹಾಜನ್ ಅವರಂತೂ ಹೆಚ್ಚು ಖುಷಿಗೊಂಡು ಇಳಕಲ್ಲಿನ ಮಹಾಂತಸ್ವಾಮಿಗಳನ್ನು ಅಭಿನಂದಿಸಿದರು.
ಹನ್ನೆರಡನೆಯ ಶತಮಾನದಲ್ಲಿ ’ಶೀಲವಂತ’ ಹಾಗೂ ’ಲಾವಣ್ಯಮ್ಮರ ವಿವಾಹವನ್ನು ಅರಗಿಸಿಕೊಳ್ಳದ ಅಂದಿನ ಸಮಾಜ ಕ್ಷಿಪ್ರ ಕ್ರಾಂತಿಗೆ ಗುರಿಯಾಗಿತ್ತು. ಹರಳಯ್ಯ ಹಾಗೂ ಮಧುವರಸರ ಕುಟುಂಬಗಳ ಸದಸ್ಯರು ಎಳೆಹೂಟಿಯಂತಹ ಬರ್ಬರ ಶಿಕ್ಷೆಗೆ ಗುರಿಯಾದ ಸಂಗತಿ ಇತಿಹಾಸ ಸ್ಪಷ್ಟವಾಗಿ ಹೇಳುತ್ತಿತ್ತು. ಶರಣರ ವಿಚಾರಗಳು ಎಷ್ಟೆ ಪ್ರಗತಿಪರವಾಗಿದ್ದರೂ, ಸಮಾಜ ಮುಖಿಯಾಗಿದ್ದರೂ, ವಚನ ಸಾಹಿತ್ಯವನ್ನು ಎಷ್ಟೇ ಕೊಂಡಾಡಿದರೂ ಇವತ್ತಿಗೂ ದಲಿತ ಮೂಲದ ಯಾವೊಬ್ಬ ವ್ಯಕ್ತಿಯನ್ನು ಮಠಾಧೀಶನನ್ನಾಗಿ ನೇಮಿಸಿದ್ದು ಇರಲಿಲ್ಲ. ಇಂಥ ವಾಸ್ತವ ಸಂದರ್ಭದಲ್ಲಿ ಇಳಕಲ್ಲಿನ ಶ್ರೀಗಳು ಬಹಿರಂಗಸಭೆಯಲ್ಲಿ ಆಡಿದ ಮಾತುಗಳು ಸಮಾಜದಲ್ಲಿ ಅಲ್ಲೊಲ ಕಲ್ಲೊಲ ಉಂಟು ಮಾಡಿದವು. ಜಾತಿ ಜಂಗಮರಿಂದ ತುಂಬಿ ತುಳುಕುತ್ತಿರುವ ಲಿಂಗಾಯತ ಮಠಾಧಿಪತಿಗಳು ಇಳಕಲ್ ಶ್ರೀಗಳ ಮಾತುಗಳಿಂದ ಒಳಗೊಳಗೆ ಉರಿದೆದ್ದರು.
’ಭಕ್ತಿ ಶುಭಾಷಯ ನುಡಿಯ ನುಡಿವೆ, ನುಡಿದಂತೆ ನಡೆವೆ
ನಡೆಯೊಳಗೆ ನುಡಿಯ ಪೂರೈಸುವೆ
ಮೇಲೆ ತೂಗುವ ತ್ರಾಸ ಕಟ್ಟಳೆ ನಿಮ್ಮ ಕೈಯ್ಯಲ್ಲಿದೆ
ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀ ಎದ್ದು ಹೋಗು’
ಎಂಬ ಬಸವಣ್ಣನವರ ಮಾತಿನಂತೆ ಇಳಕಲ್ಲಿನ ಶ್ರೀಗಳು ತಮ್ಮ ಮಾತಿಗೆ ಬದ್ಧರಾಗಿದ್ದರು. ಅವರಿಗೆ ಆಗ ರಾಜ್ಯದ ರಾಷ್ಟ್ರದ ಹಲವಾರು ಜನ ರಾಜಕಾರಣಿಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಹೇಳಿಸಿ ನೋಡಿದರು. ತಮ್ಮ ಅಭಿಪ್ರಾಯವನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಕೆಲವರು ಬೆದರಿಕೆಯನ್ನು ಒಡ್ಡಿದರು. ಆದರೆ ’ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ. ಲೋಕವಿರೋಧಿ ಶರಣ ಯಾರಿಗೂ ಅಂಜಲಾರ’ ಎಂಬಂತೆ ಇಳಕಲ್ಲಿನ ಶ್ರೀಗಳು ನಡೆದು ಹೋದರು. ಮೊಟ್ಟ ಮೊದಲನೆಯದಾಗಿ ತಮ್ಮ ಇಳಕಲ್ಲಿನ ಶಾಖಾ ಮಠವಾದ ಸಿದ್ಧಯ್ಯನ ಕೋಟೆಗೆ ದಲಿತ ಮೂಲದ ಬಸವಾಯತರಾದ ಶ್ರೀ ಬಸವಲಿಂಗ ಸ್ವಾಮಿಗಳನ್ನು ನೇಮಿಸಿ ತಮ್ಮ ಬಸವತನವನ್ನು ಉಳಿಸಿಕೊಂಡರು.
ಇದಿಷ್ಟೆ ಅಲ್ಲದೆ ಲಿಂಗಸೂಗೂರಿನ ತಮ್ಮ ಮಹಾಂತ ಮಠಕ್ಕೂ ಬಂಜಾರ ಸಮುದಾಯದ ಶ್ರೀ ಸಿದ್ದಲಿಂಗ ಶರಣನನ್ನು ನೇಮಿಸಿ ಮತ್ತದೆ ಕರ್ಮಠ ಲಿಂಗಾಯತರ ರಗಳೆ ಮೈಮೇಲೆ ಎಳಕೊಂಡರು. ಈ ಮೊದಲಿದ್ದ ಮಹಾಂತಪ್ಪಗಳ ಮಠವನ್ನೆ ಕುಯುಕ್ತಿಯಿಂದ ಅಲ್ಲಿನ ಜಾತಿ ಜಂಗಮವರು ಕಸಗೊಂಡರು. ಆದರೆ ಅಲ್ಲಿರುವ ಶರಣ ಭಕ್ತರ ನೆರವಿನೊಂದಿಗೆ ಮಹಾಂತ ಶಿವಯೋಗಿಗಳ ಶಾಖಾ ಮಠವನ್ನು ಕಟ್ಟಿ ತೋರಿಸಿ, ಜನ ಮಾನಸದಲ್ಲಿ ಹೊಸ ಹುಟ್ಟನ್ನು ಹುರುಪನ್ನು ತುಂಬಿದರು.
ಇಳಕಲ್ಲಿನ ತಮ್ಮ ಮೂಲ ಪರಂಪರೆಯ ಪೀಠಕ್ಕೂ ಮೈಸೂರಿನ ಶ್ರೀ ಸಿದ್ಧರಾಮ ಸ್ವಾಮಿಗಳನ್ನು ಪಟ್ಟಗಟ್ಟುವಾಗ ಜಾತಿ ಜಂಗಮರ ಭಾರಿ ವಿರೋಧ ಎದುರಿಸಬೇಕಾಯಿತು. ಪಟ್ಟಾಧಿಕಾರದ ಸಂದರ್ಭದಲ್ಲಿ ವೇದಿಕೆಯ ಕಡೆಗೆ ಕಲ್ಲು ತೂರಿದರು. ವಿರೋಧಿ ಘೋಷಣೆ ಕೂಗಿದರು. ಇಡೀ ಕಾರ್ಯಕ್ರಮವನ್ನು ರಣಾಂಗಣವಾಗುವಂತೆ ವ್ಯವಸ್ಥಿತ ಪಿತೂರಿ ಕೈಗೊಂಡರು. ಆದರೂ ಮಹಾಂತಪ್ಪಗಳು ತಾವು ಕೈಕೊಂಡ ಬಸವ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರು.
ಶರಣತನ ಅನ್ನುವುದು ನಿಜಕ್ಕೂ ಕಠಿಣ. ’ಅದು ಭಕ್ತಿಯಂತೆ ಹೋಗುತ್ತ ಬರುತ್ತ ಕೊಯ್ಯುವ ಗರಗಸ’. ಆದರೆ ಇಳಕಲ್ಲಿನ ಪೂಜ್ಯ ಶ್ರೀ ಮಹಾಂತಶಿವಯೋಗಿಗಳು ಮಾತ್ರ ಅದನ್ನು ತಮ್ಮ ಮಠಗಳಲ್ಲಿ ಹಾಗೂ ನಡೆಗಳಲ್ಲಿ ಅನುಚಾನವಾಗಿ ಹಾಸಿ ಹೊದ್ದುಕೊಂಡು ನಡೆದಿದ್ದಾರೆ. ’ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂದು ಸಭೆಗಳಲ್ಲಿ ಹೇಳಿ ಅಲ್ಲಿ ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಾದಾಗ ಉಂಟಾಗುವ ಅಡ್ಡಿ ಆತಂಕಗಳು, ತಲ್ಲಣಗಳು ನೂರಾರು. ಇಳಕಲ್ಲಿನ ಮಹಾಂತ ಅಪ್ಪಗಳು ಯಾರ ಮನೆಗೆ ಹೋಗಲಿ ಸೀದಾ ಅವರ ಮನೆಯ ದೇವರ ಮನೆಗೆ ಕಾಲಿಕ್ಕಿ, ಆ ಜಗುಲಿಯ ಮೇಲೆ ಇರುವ ಹತ್ತಾರು ದೇವರುಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಊರ ಹೊರಗೆ ಒಯ್ದು ಬಿಸಾಡುವರು. ಮನೆಯ ಮಂದಿಯನ್ನೆಲ್ಲ ಒಂದೆಡೆ ಕುಳ್ಳಿರಿಸಿಕೊಂಡು
’ಅರಗು ತಿಂದು ಕರಗುವ ದೈವವ
ಉರಿಯ ಕಂಡರೆ ಮುರುಟುವ ದೈವವ
ಅಂಜಿಕೆಯಾದಡೆ ಹೂಳುವ ದೈವವ
ಅವಸರಬಂದರೆ ಮಾರುವ ದೈವವ
ಎಂತು ಸರಿಯೆಂಬೆನಯ್ಯ?’
ಎಂದು ಬಸವಾದಿ ಶರಣರ ವಚನಗಳನ್ನು ಮನಂಬುಗುವಂತೆ ವಿವರಿಸಿ ಹೇಳುತ್ತಾರೆ. ’ಸತ್ಯ ಶುದ್ಧ ಕಾಯಕ ಮಾಡಿದಡೆ ಎತ್ತೆತ್ತ ನೋಡಿದಡತ್ತತ್ತ ಲಕ್ಷ್ಮಿ ತಾನಾಗಿಪ್ಪಳು’ ಎಂದು ತಿಳಿಹೇಳುತ್ತಾರೆ. ”ನೀವು ಪೂಜಿಸುವ ಕರಿಲಕ್ಷ್ಮಿ- ಕೆಂಪು ಲಕ್ಷ್ಮಿ ಚಿತ್ರವನ್ನು ರೇಖಿಸಿರುವ ಕಲಾವಿದನ ಹೆಂಡತಿಯೋ, ಪ್ರೇಯಸಿಯೋ ! ಮಗಳೋ ಆಗಿದ್ದಾಳೆ”. ಆದ್ದರಿಂದ ಅರ್ಥವಿಲ್ಲದ ಇಂಥ ದೇವರುಗಳನ್ನು ಪೂಜಿಸಲೇ ಬಾರದು. ಅಪ್ಪ ಬಸವಣ್ಣನವರು ಕೊಟ್ಟ
’ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತೀಯ
ಲಿಂಗವೇ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ಎಂದು ಹೇಳಿರುವ ’ಇಷ್ಟಲಿಂಗ’ವನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ’ಬಾರದು ಬಪ್ಪದು. ಬಪ್ಪದು ತಪ್ಪದು’ ಎಂದು ಅವರೆಲ್ಲರ ಮನಸ್ಸಿನ ಕತ್ತಲೆಯನ್ನು ’ವಚನ ದೀಪ್ತಿ’ಯ ಮೂಲಕ ಬೆಳಗಿಸುತ್ತಾರೆ. ಇಷ್ಟಾಗಿಯೂ ’ನಿಮ್ಮ ಮನೆಯ ದೇವರುಗಳು ನಿಮ್ಮನ್ನು ಕಾಡಲು ಪೀಡಲು ಶುರುಮಾಡಿದರೆ ಅವುಗಳಿಗೆಲ್ಲ ನನ್ನ ಅಡ್ರೆಸ್ ಕೊಡಿ. ಅವು ನನ್ನೊಂದಿಗೆ ಬಂದು ಗುದ್ದಾಡಲಿ’, ಎಂದು ಹಾಸ್ಯಮಯವಾಗಿ ಮಾತನಾಡುತ್ತ ಭಕ್ತನ ’ಭಯ’ವನ್ನು ಕಿತ್ತಿ ಬಿಸುಡುತ್ತಾರೆ.
ಬಸವಾದಿ ಶರಣರ ವಿಚಾರಗಳನ್ನು ಕರ್ನಾಟಕದ ಬಹುತೇಕ ಮಠಗಳು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡು ಲಿಂಗಾಯತರನ್ನು ದಿಶಾಬೂಲಗೊಳಿಸುತ್ತ ಹೊರಟಿದ್ದರೆ ಇಳಕಲ್ಲಿನ ಶ್ರೀಗಳು ಮಾತ್ರ ಅವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹೀಗಾಗಿ ಶ್ರೀಗಳ ಮಾತು, ನಡೆ ನುಡಿ ಭಾವಗಳೆಲ್ಲವೂ ’ಪರುಷ ’ ಎಂದರೆ ತಪ್ಪಾಗಲಾರದು.
ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ತಮ್ಮ ಊರಿನಿಂದ ದೊಡ್ಡ ದೊಡ್ಡ ಮಠಗಳಿಗೆ, ದೇವಸ್ಥಾನಗಳಿಗೆ ಪಾದಯಾತ್ರೆ ಹೊರಡುತ್ತಾರೆ. ದಾರಿ ಉದ್ದಕ್ಕೂ ಭಜನೆ ಮಾಡುತ್ತ, ಊರೂರುಗಳಲ್ಲಿ ಪ್ರಸಾದ ಸ್ವೀಕರಿಸಿ ಮುನ್ನಡೆಯುತ್ತಾರೆ. ಪ್ರಚಾರ ಗಿಟ್ಟಿಸುತ್ತಾರೆ. ವರ್ಷಕ್ಕೊಂದು ಸಲ ದೇವರ ಹೆಸರಿನ ಮೇಲೆ ಪಾದಯಾತ್ರೆಯ ಮಜಾ ಅನುಭವಿಸಿ ಖುಷಿ ಪಡುತ್ತಾರೆ. ಇಂಥ ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವುದು ಕೇವಲ ಭಕ್ತರಿಗೆ ಮಾತ್ರ ಸಂಬಂಧಿಸಿದ ಕೆಲಸ ಎಂದು ಬಹಳಷ್ಟು ಜನ ಮಠಾಧೀಶರು ತಿಳಿದುಕೊಂಡಿದ್ದಾರೆ. ಆದರೆ ಮಹಾಂತಪ್ಪಗಳು ಮಾತ್ರ ’ಭಕ್ತನಿದ್ದ ಠಾವೆ ಕೈಲಾಸ’ , ’ಭಕ್ತನ ಮನೆಯಂಗಳವೆ ವಾರಣಾಸಿ’ ಎಂದು ಅರ್ಥೈಸಿಕೊಂಡಿದ್ದರಿಂದ ಇವರು ಹಲವಾರು ಸಲ ಭಕ್ತನ ಮನೆಗಳಿಗೆ ಪಾದಯಾತ್ರೆಯ ಮೂಲಕ ಹೊರಡುತ್ತಾರೆ.
ಸತ್ಯಂಪೇಟೆಯ ನನ್ನ ಅಜ್ಜ ಗುರಪ್ಪ ಶರಣರ ’ಬಸವ ತತ್ವ ಸಮಾವೇಶ’ಕ್ಕೆ ಐದಾರು ಬಾರಿ ’ಇಳಕಲ್ಲಿನಿಂದ-ಸತ್ಯಂಪೇಟೆ’ಯವರೆಗೆ ಪಾದಯಾತ್ರೆಯ ಮೂಲಕ ಬಂದಿದ್ದಾರೆ ಎಂಬುದೇ ಒಂದು ಇತಿಹಾಸ. ಹೀಗೆ ಇಳಕಲ್ಲಿನಿಂದ ಪಾದಯಾತ್ರೆ ಹೊರಟರೆ ಅದು ಕೇವಲ ಕಾಟಾಚಾರದ ಪಾದಯಾತ್ರೆ ಆಗಿರುವುದಿಲ್ಲ. ದಾರಿಯಲ್ಲಿ ಬರುವ ಪ್ರತಿ ಹಳ್ಳಿ ಹಳ್ಳಿಗೂ ಭೇಟಿಕೊಟ್ಟು ಆ ಊರಿನ ತುಂಬೆಲ್ಲ ಚಟಗಳನ್ನು ತಮ್ಮ ಜೋಳಿಗೆ ಹಾಕುವಂತೆ ವಿನಂತಿಸುತ್ತಾರೆ. ಕೊನೆಯಲ್ಲಿ ಬಸವಾದಿ ಶರಣರ ವಿಚಾರಗಳನ್ನು ಆ ಹಳ್ಳಿಯ ಎಲ್ಲರಿಗೂ ಸರಳವಾಗಿ ಮುಟ್ಟುವಂತೆ ವಿವರಿಸಿ ಹೇಳುತ್ತಾರೆ. ”ಕಂದಾಚಾರ , ಮೂಢನಂಬಿಕೆಗಳ ದಾಸರಾಗಿರುವ ಭಕ್ತರೆಲ್ಲ ಅದರಿಂದ ಹೊರಬರದೆ ಹೋದರೆ ನಿಮ್ಮನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ’ ಎಂಬುದನ್ನು ಖಚಿತವಾಗಿ ತಿಳಿಸಿಹೇಳುತ್ತಾರೆ.
”ಯಾವ ಮಠಾಧೀಶರ, ಸ್ವಾಮಿಗಳ ಕೈಯ್ಯಲ್ಲಿ ಏನೂ ಇಲ್ಲ. ನಿತ್ಯವೂ ಪರಿಶುದ್ಧವಾದ ಕಾಯಕ ಮಾಡಿಕೊಂಡಿರುವ ನಿಮ್ಮ ಕೈಯ್ಯಲ್ಲಿ ಎಲ್ಲವೂ ಇದೆ ಎಂದು ಎಚ್ಚರಿಸುತ್ತಾರೆ. ನೀವು ಕೊರಳಲ್ಲಿ ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ ಲೊಟ್ಟಿ ಮೂಳರಾಗುತ್ತೀರಿ!” ಎಂದು ಹೇಳಲು ಹಿಂದೆ - ಮುಂದೆ ನೋಡುವುದಿಲ್ಲ.
’ನಿಮಗೆ ಯಾರಾದರೂ ತಾಯಿತ- ಕರಿದಾರ- ನಿಂಬಿಕಾಯಿ ಮಂತ್ರಿಸಿಕೊಡುವುದು ಅವರ ವ್ಯಾಪಾರವೇ ಹೊರತು ಅದರಿಂದ ಏನೂ ಸಾಧ್ಯವಿಲ್ಲ ಎಂದು ಮನಮುಟ್ಟುವಂತೆ ಹೇಳುತ್ತಾರೆ. ’ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸತ್ಯ ಶುದ್ಧವಾದ ಕಾಯಕ ಮಾಡಿ. ಮಾಡಿದೆನೆಂಬುದು ಮನದಲ್ಲಿ ಹೊಳೆದೊಡೆ ಎಡಿಸಿ ಕಾಡಿತ್ತು ಶಿವಡಂಗುರ ಹಾಗಾಗಿ ಭಕ್ತರೆಲ್ಲ ನಿಷ್ಕಲ್ಮಷ ಹೃದಯದಿಂದ ದಾಸೋಹ ಮಾಡಬೇಕೆಂದು ತಿಳಿ ಹೇಳುತ್ತಾರೆ. ಅವರೆಲ್ಲ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವಂತೆ ವಿವರಿಸುತ್ತಾರೆ. ಬಸವಾದಿ ಶರಣರು ಕನಸಿದ ಸಮಾಜವನ್ನು ನಾವೆಲ್ಲ (ಕಾವಿ ಹಾಕಿದ ಜಾತಿ ಜಂಗಮರು) ತಿಂದು ಹಾಕಿದ್ದೇವೆ. ’ದಯವೇ ಧರ್ಮದ ಮೂಲ’ವಾಗಿದ್ದ ಬಸವಣ್ಣನವರ ಧರ್ಮವನ್ನು ಇಂದು ’ಭಯವೇ ಧರ್ಮದ ಮೂಲ’ ಎಂಬಂತೆ ಚಿತ್ರಿಸಿದ್ದೇವೆ. ’ಲಾಂಛನಕ್ಕೆ ಶರಣೆಂಬೆ’ ಎಂಬ ಬಸವಣ್ಣನವರ ಮಾತನ್ನು ಹೇಳಿ ಸಾಕಷ್ಟು ಜನ ಭಕ್ತರನ್ನು ದಿಕ್ಕು ತಪ್ಪಿಸಿದ್ದೇವೆ. ಆದರೆ ಬಸವಣ್ಣನವರು ಅದೇ ವಚನದಲ್ಲಿ ಹೇಳಿದ ’ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದಡೆ ಕೂಡಲ ಸಂಗಮದೇವ ಸಾಕ್ಷಿಯಗಿ ಛೀ ಎಂಬೆ’ ಎಂಬ ಮಾತನ್ನು ಅಪ್ಪಿ ತಪ್ಪಿಯೂ ವಿವರಿಸಿ ಹೇಳಿಲ್ಲ. ಒಟ್ಟಿನಲ್ಲಿ ಆತ್ಮವಂಚನೆಯ ಬಾಳನ್ನು ಮಠಾಧೀಶರು ನಡೆಸಿದ್ದೇವೆ. ಹೀಗಾಗಿ ದಿಕ್ಕು ತಪ್ಪಿದ ನಾವೆಯಲ್ಲಿ ಕುಳಿತಿರುವ ಭಕ್ತರು ದಾರಿ ತಪ್ಪಿದ್ದಾರೆ. ಮೂಲ ’ಲಿಂಗಾಯತ’ವನ್ನು ಮರೆತು. ಮತ್ತದೆ ಜಾತಿ ವ್ಯವಸ್ಥೆಯ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ವ್ಯಥೆ ಪಡುತ್ತಾರೆ.
ಒಟ್ಟಿನಲ್ಲಿ ಬಸವ ಮಹಾಮಣಿಯವನ್ನು ಹೊತ್ತುಕೊಂಡು ಮುನ್ನಡೆದಿರುವ ಇಳಕಲ್ಲಿನ ಶ್ರೀ ಮಹಾಂತಸ್ವಾಮಿಗಳನ್ನು ’ಬಸವ ತತ್ವದ ದಂಡನಾಯಕರು’ ಎಂದು ಖಚಿತವಾಗಿ ಹೇಳಬಹುದು. ಬಸವಣ್ಣನವರ ಮಾತೃ ಹೃದಯ, ಲಘು ಹಾಸ್ಯ, ವಿಡಂಬನೆ, ತಮಾಷೆ, ವ್ಯಂಗ್ಯವನ್ನು ಸಂಪೂರ್ಣವಾಗಿ ಮಹಾಂತಪ್ಪಗಳು ಅಳವಡಿಸಿಕೊಂಡಿದ್ದಾರೆ. ಮಾಡಿದ ತಪ್ಪನ್ನು - ತಪ್ಪೆಂದು ಒಪ್ಪಿಕೊಳ್ಳುವ ಎದೆಗಾರಿಕೆ ಅನೇಕರಿಗೆ ಇರುವುದೆ ಇಲ್ಲ. ಆದರೆ ಮಹಾಂತಪ್ಪಗಳು ಮಾತ್ರ ಇದಕ್ಕೆ ಹೊರತಾದವರು.
ಸೊಲ್ಲಾಪುರದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರು: ” ಮಠಾಧೀಶರೆಲ್ಲ ಆತ್ಮವಂಚನೆಯ ಬಾಳು ಬದುಕುತ್ತಿದ್ದಾರೆ. ಅಲ್ಲದೆ ಬಸವಾದಿ ಶರಣರ‍್ಯಾರು ಸನ್ಯಾಸ ಶ್ರೇಷ್ಠ ಎಂದು ಹೇಳಿಲ್ಲ. ಹುಸಿ ಬ್ರಹ್ಮಚರ್ಯಕ್ಕೆ ಜೋತುಬಿದ್ದ ಲಿಂಗಾಯತ ಮಠಾಧೀಶರುಗಳೆಲ್ಲ ತಮ್ಮ ಮಠಗಳಲ್ಲಿ ಅನಧಿಕೃತವಾಗಿ ಹೆಂಡತಿಯರನ್ನು ಮಕ್ಕಳನ್ನು ಹೊಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಠಾಧೀಶರುಗಳಿಗೆಲ್ಲ ಮದುವೆ ಮಾಡಿ, ಪೀಠಕ್ಕೆ ಕುಳ್ಳಿರಿಸಬೇಕು” ಎಂದು ಹೇಳಿದರು.
ಈ ಮಾತುಗಳನ್ನು ಕೇಳಿದ ಆ ಸಭೆಯಲ್ಲಿ ಕುಳಿತಿದ್ದ ಬಹುತೇಕ ಮಠಾಧೀಶರು ನನ್ನ ತಂದೆಯವರ ಅಭಿಪ್ರಾಯವನ್ನು ಖಂಡಿಸಿ ಮಾತನಾಡಿದರು. ಆದರೆ ಇಳಕಲ್ಲಿನ ಶ್ರೀಗಳು ಮಾತ್ರ : ”ಲಿಂಗಣ್ಣನವರು ಆಡಿರುವ ಮಾತುಗಳು ವಿಚಾರ ಮಾಡುವಂತೆ ಇವೆ. ಈ ಕುರಿತು ಸಮಾಜ ಮುಕ್ತವಾಗಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕಾಗಿದೆ ಎಂದು ಒತ್ತಿ ಹೇಳಿದರು ಮಾತ್ರವಲ್ಲ, ಮಠಾಧೀಶರು ಆತ್ಮವಂಚನೆಗೆ ಹೆಸರಾಗಿದ್ದೇವೆ ”ಎಂತಲೂ ಬಣ್ಣಿಸಿಕೊಂಡರು.
ಬಸವಾದಿ ಶರಣರ ವಿಚಾರಗಳನ್ನು ಬದುಕುವ ಹಾಗೂ ಅವನ್ನು ಜನತೆಗೆ ವಿವರಿಸಿ ಹೇಳುವ ಕವಿ, ಸಾಹಿತಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಆದ್ದರಿಂದ ಇಂಥವರ ಮನೆಗಳನ್ನು ಹುಡುಕಿಕೊಂಡು ಅವರೇ ಹೊರಟು ನಿಲ್ಲುತ್ತಾರೆ. ಅವರೊಂದಿಗೆ ಲೋಕಾಭಿರಾಮವಾಗಿ ಚರ್ಚಿಸುತ್ತಾರೆ. ಪೀಠಾಧಿಕಾರಿಯ ಹಮ್ಮು-ಬಿಮ್ಮುಗಳನ್ನು ತೋರಿಸದೆ ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ. ಗುಲ್ಬರ್ಗಾ, ಬೀದರ್‌ಗೆ ಹೋಗುವ ಪ್ರಸಂಗ ಬಂದಾಗಲೆಲ್ಲ ನಮ್ಮ ಮನೆಗೆ ಮಹಾಂತಪ್ಪಗಳು ಬಂದು ಹೋಗಲೇ ಬೇಕು. ಇಲ್ಲದೆ ಹೋದರೆ ಏನೋ ಕಳಕೊಂಡ ಭಾವ ಅವರನ್ನು ಆವರಿಸಿದಂತಾಗುತ್ತದೆ ಎನ್ನುತ್ತಾರೆ.
ತೀರಾ ಇತ್ತೀಚೆಗೆ ಯಾವುದೊ ಕಾರ್ಯಕ್ರಮವನ್ನು ಮುಗಿಸಿಕೊಂಡು ಎಂದಿನಂತೆ ನಮ್ಮ (ಶಹಾಪುರದ) ಮನೆಗೆ ಬರುವವರು ಬಾರದೆ, ಮನೆಯನ್ನು ದಾಟಿ ಅವರ ಕಾರು ಮುನ್ನಡೆಯಿತು. ನನಗಾದರೂ ಒಳಗೊಳಗೆ ಕಳವಳ. ಡ್ರೈವರ್ ಮರೆತು ಮುಂದೆ ಹೋದನೆ? ಎಂಬ ಆತಂಕ. ಅಥವಾ ಮನೆ ಮನೆಯ ಮುಂದುಗಡೆ ಇರುವ ಶ್ರೀಚರಬಸವೇಶ್ವರ ಗದ್ದುಗೆಯಲ್ಲಿ ಯಾವುದಾದರೂ ಕಾರ್ಯಕ್ರಮ ಇರಬಹುದೆ? ಎಂಬ ಕುತೂಹಲ. ತಕ್ಷಣ ಅವರ ಮೊಬೈಲ್‌ಗೆ ಪೋನ್ ಮಾಡಿದೆ. ’ಅಲ್ಲೆ ಮನೆಯಲ್ಲೆ ಇರು, ಈಗ ಬರುತ್ತೇನೆ. ನಮ್ಮ ಜೊತೆಗಿರುವ ಸ್ವಾಮಿಗಳೊಬ್ಬರು ಶ್ರೀ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಹೇಳಿದ್ದರಿಂದ ನಡೆದಿದ್ದೇವೆ’ ಅಂದರು. ನನಗೋ ತಡೆಯಲಾಗಲಿಲ್ಲ. ಅವರನ್ನು ಬೆನ್ನಟ್ಟಿ ನಾನೂ ಹೋದೆ. ಅಲ್ಲಿ ಆಗಲೆ ಅವರನ್ನು ಕುಳ್ಳಿರಿಸಿಕೊಂಡು ಬಸವಲಿಂಗ ಶರಣರು ಕಲ್ಯಾಣದ ಶರಣರ ಕುರಿತು ಹೇಳಿದ ಹಾಡುಗಳನ್ನು ಹಾಡುತ್ತಿದ್ದರು. ಹಾಡು ಮುಗಿಯಿತು. ಕೊನೆಗೆ ಅಲ್ಲಿ ಸೇರಿದ ಮಠದೊಳಗಣ ಜನರೆಲ್ಲ ವಂದಿಸಿ - ಅರ್ಚಿಸಿ, ಕಾಣಿಕೆ ನೀಡಿದರು.
ಆ ಕಾಣಿಕೆಯನ್ನು ಕೈಯ್ಯಲ್ಲಿ ಹಿಡಕೊಂಡು, ತಮ್ಮಲ್ಲಿಯದೂ ಇನ್ನಷ್ಟು ಸೇರಿಸಿಕೊಂಡು ದೂರದಲ್ಲಿ ಇದೆಲ್ಲವನ್ನೂ ನೋಡುತ್ತ ನಿಂತಿದ್ದ ನನ್ನನ್ನು ಹತ್ತಿರ ಕರೆದು ತಮ್ಮ ಕೈಯ್ಯಲ್ಲಿ ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ನನಗೆ ಇದೆಲ್ಲ ಕೊಂಚ ಇರಿಸು ಮುರಿಸು ಅನ್ನಿಸಿತು. ನನ್ನ ಜೇಬಿನಲ್ಲಿ ರೂಪಾಯಿಗಳನ್ನು ಇಡಲು ಹವಣಿಸುತ್ತಿದ್ದ ಕೈಯ್ಯನ್ನು ತಡೆಹಿಡಿದೆ. ಆಗ ಅವರು ’ಸುಮ್ಕ ತೋಗೋಬೇಕು. ನೀವೆಲ್ಲ ಬಸವಣ್ಣನ ಕೈಂಕರ್ಯ ಮಾಡುವವರು. ಇದೆಲ್ಲ ನಿಮಗೆ ಸೇರಬೇಕು’ ಎಂದೆಲ್ಲ ಹೇಳಿದಾಗ ಮನ ತುಂಬಿಬಂತು. ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿತು. ಮಾತು ಮೌನವಾಗಿ, ಅದು ಬಂಗಾರವಾಯಿತು.
೧೯೯೭ ರ ಜೂನ್ ೧೮ ರಂದು ಜರುಗಿದ ನನ್ನ ಹಾಗೂ ಶರಾವತಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಳೆ ತಂದರು. ನನ್ನ ಅಜ್ಜನಾದ ಗುರಪ್ಪ ಯಜಮಾನರ ಪುಣ್ಯ ಸ್ಮರಣೆಯ ದಿನ ನನ್ನ ಮದುವೆ ಏರ್ಪಡಿಸುವಂತೆ ಸೂಚಿಸಿ, ಆ ದಿನ ಕ್ರಾಂತಿಯ ಗಂಗೋತ್ರಿ ಅಕ್ಕನಾಗಮ್ಮಳ ಬಗೆಗೆ ಒಂದು ವಿಚಾರಗೋಷ್ಠಿ ಏರ್ಪಡಿಸಿದ್ದು ಮರೆಯಲಾಗದ್ದು. ಹಂದರ ಹಾಕದೆ, ಬಾಸಿಂಗ ಕಟ್ಟದೆ, ಸುಲಿಗೆ ಸುತ್ತದೆ, ಮದುಮಕ್ಕಳನ್ನು ಮಾಡದೆ, ಸರಳ ಹಾಗೂ ಸಹಜವಾಗಿ ನಡೆದ ಮದುವೆಯ ಸಾರಥ್ಯವನ್ನು ಮಹಾಂತಪ್ಪಗಳು ವಹಿಸಿದ್ದರು ಎಂಬುದೇ ನನಗೊಂದು ಹೆಮ್ಮೆ.
’ನಡೆದುದೇ ಮಾರ್ಗವಾದುದು ಶಿವನ ಮದಕರಿಗೆ
ನುಡಿದುದೇ ವೇದವಾದುದು ಶಿವನ ಶರಣರಿಗೆ’
ಇದು ಮಹಾಕವಿ ಹರಿಹರನ ಉಕ್ತಿ. ’ಮದವೇರಿದ ಆನೆಯು ಅರಣ್ಯದ ದಾರಿ ಹುಡುಕಿಕೊಂಡು ಹೋಗುವುದಿಲ್ಲ. ಅದು ನಡೆದು ಹೋದಲ್ಲಿಯೇ ದಾರಿಯಾಗುತ್ತದೆ. ಹಾಗೆಯೇ ಶರಣ ಲೋಕದಿಚ್ಚೆಯ ನುಡಿಯ, ಲೋಕದಿಚ್ಚೆಯ ನಡೆಯ , ಅವರು ಸರ್ವ ಸ್ವತಂತ್ರರು; ಅವರು ಪೂಜಾರಿಗಳ ನೆರವಿಲ್ಲದೆ , ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ದೇವರೊಡನೆ ಭಕ್ತನ ಸಂಬಂಧವನ್ನಿಟ್ಟುಕೊಂಡ ಮಹಾನುಭಾವಿಗಳೆ ಶರಣರು’ ಎಂದು ಉತ್ತಂಗಿ ಚೆನ್ನಪ್ಪನವರು ಕಲ್ಯಾಣದ ಅಂದಿನ ಶರಣ ಕುರಿತು ಹೇಳುತ್ತಾರೆ.
ಇಂಥ ಎಲ್ಲಾ ವೈಶಿಷ್ಟ್ಯತೆಗಳನ್ನು ಮುಪ್ಪರಿಗೊಳಿಸಿಕೊಂಡಿರುವ ಮಹಾಂತ ಅಪ್ಪಗಳೂ ಇಂಥ ಶರಣರಲ್ಲಿ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತಾಗಲಾರದು. ಹೊಗಳಿಕೆ ಉಬ್ಬದ, ತೆಗಳಿಕೆ ಕುಗ್ಗದ, ಅಗ್ಗದ ಪ್ರಚಾರಕ್ಕೆ ತಮ್ಮನ್ನು ತಾವು ಎಂದೂ ಒಡ್ಡಿಕೊಳ್ಳದ ಬಸವ ಮಹಾ ಮಣಿಯವನ್ನು ಹೊತ್ತುಕೊಂಡು ಒಯ್ಯುತ್ತಿರುವ ಮಹಾಂತಪ್ಪಗಳು ನಿಜವಾದ ಶರಣ ಜಂಗಮರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಿಕ್ಕಿಲ್ಲ, ಅಲ್ಲವೆ?

ವಿಶ್ವಾರಾಧ್ಯ ಸತ್ಯಂಪೇಟೆ
ಪತ್ರಕರ್ತರು , ಬಸವ ಮಾರ್ಗ ರಸ್ತೆ , ಸಿ.ಬಿ.ಕಾಲೋನಿ ಶಹಾಪುರ - ಯಾದಗಿರ (ಜಿಲ್ಲೆ), ಮೊಬೈಲ್ ; ೯೪೮೦೧೬೧೩೧೫

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ