ಗುರುವಾರ, ಮೇ 20, 2010

ಶಿವಮೊಗ್ಗ ವಿ.ವಿ.ಯಲ್ಲಿ ಪಂಚಪೀಠಿಗಳ ಹುನ್ನಾರ

    ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಯಡ್ಡಿಯ ಸರಕಾರದಲ್ಲಿ ಅಡ್ಡಾದಿಡ್ಡಿಯಾಗಿ ಆಲೋಚಿಸುವವನೆ ಪಂಡಿತ, ಬುದ್ದಿಜೀವಿ ಎಂದು ಕರೆಯಿಸಿಕೊಳ್ಳುವ ಕಾಲ ಬಂದಿದೆ. ಹೀಗಾಗಿ ಸರಕಾರದ ಸುತ್ತೋಲೆಗಳಲ್ಲಿ ದಿನ ನಿತ್ಯ  ಅನೇಕ ಜನವಿರೋಧಿಯಾದ ಅಂಶಗಳೆ ಪ್ರಕಟವಾಗಿರುವ ಸಂಗತಿಗಳನ್ನು ನಾವೆಲ್ಲ  ಪತ್ರಿಕೆಗಳಲ್ಲಿ ಓದುತ್ತೇವೆ. ಹಿಂದೊಮ್ಮೆ ಮುಜರಾಯಿ ಇಲಾಖೆಯ ಸಚಿವ ತನ್ನ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲೂ ಯಡಿಯೂಪ್ಪನವರ ಹೆಸರಿನಲ್ಲಿ ಮಂಗಳಾರತಿ ಮಾಡಬೇಕು ಎಂದು ಹೊರಡಿಸಿದ್ದ ಆಜ್ಞೆ ಎಷ್ಟೊಂದು ಬಾಲಿಷವಾಗಿತ್ತು ಎಂಬುದು ಎಲ್ಲರೂ ಬಲ್ಲ ಸಂಗತಿಯಾಗಿತ್ತು. ಕಂಪ್ಯೂಟರಿನ ಇವತ್ತಿನ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಶಿವರಾತ್ರಿಯ ದಿನದಂದು ಸರಕಾರ ತನ್ನ ಖಚರ್ಿನಲ್ಲಿ ಗಂಗೋತ್ರಿ, ಯಮನೋತ್ರಿಯ ನದಿಯ ನೀರನ್ನು ತಂದು ಪವಿತ್ರ ಉದಕವೆಂದು ಹಂಚುವುದು ಎಷ್ಟೊಂದು ಅವೈಜ್ಞಾನಿಕ ಹಾಗೂ ಮೂರ್ಖತನದ ಪರಮಾವಧಿಯೆಂದು ಯಾರಿಗಾದರೂ ಅನ್ನಿಸದೆ ಇರದು.
    ಆದರೆ ನಾಚಿಕೆ ಎಂಬುದೆ ಇಲ್ಲದ, ತಲೆಯಲ್ಲಿ ಕೊಂಚವೂ ಮಿದುಳು ಇಷ್ಟುಕೊಳ್ಳದ ,ಪುರೋಗಾಮಿ ಸರಕಾರದ ತಲೆಯಲ್ಲಿ ಇಂಥ ಅವೈಜ್ಞಾನಿಕ ಆಲೋಚನೆಗಳು ಹೊರಬರುವುದು ಸಹಜವೆ ಆಗಿದೆ. ಸರಕಾರದ ಇಂಥ ತಲೆಕೆಟ್ಟ ನೀತಿಯನ್ನು ಗಮನಿಸಿ , ಅಲ್ಲಲ್ಲಿ ಇರುವ ಸರಕಾರದ ಬೆಂಬಲಿಗರು ಅದರ ಲಾಭ ಪಡೆಯಬೇಕೆಂದು ಹೊಂಚುಹಾಕುತ್ತಿದ್ದಾರೆ. ತೀರಾ ಇತ್ತೀಚೆಗೆ ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಶ್ರೀಶ್ರೀ ಜಗದ್ಗುರು ಪಂಚಾಚಾರ್ಯ ಅಧ್ಯಯನ ಪೀಠವನ್ನು ಸ್ಥಾಪಿಸಲು ಕೋರಿ ಈಗಾಗಲೇ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿದ್ದಾರೆ.
    ಜಗದ್ಗುರು ಎಂಬ ಪದವೆ ಮೊಟ್ಟ ಮೊದಲು ಪ್ರಜಾಪ್ರಭುತ್ವವನ್ನು ಅಣಕ ಮಾಡುವ ಪದ. ಇಲ್ಲಿ ಪರಸ್ಪರ ಸಮಾನತೆ ಎಂಬುದೆ ಇಲ್ಲ. ಇದು ಭೂರ್ಜತನದ ಪಳಿಯುಳಿಕೆ. ಅಸಮಾನತೆ- ಅವೈಜ್ಞಾನಿಕತೆ- ಅಸಂಗತ ಸಂಗತಿಗಳೆ ಇದರ ಮೂಲ ತತ್ವಗಳು. ಇನ್ನೂ ಪಂಚಾಚಾರ್ಯರ ಬಗೆಗೆ ಹೇಳುವುದಾದರೆ ಅವರ ಅಸ್ತಿತ್ವದ ಬಗೆಗೆ ಸ್ಪಷ್ಟ ಚಿತ್ರಗಳೆ ಇಲ್ಲ. ಜಗತ್ತು ಹುಟ್ಟುವುದಕ್ಕಿಂತ ಮೊದಲೆ ಅಂದರೆ ಕೈಲಾಸದಲ್ಲಿ ಪರಶಿವನಿಗೆ ಮತಬೋಧೆಯನ್ನು ಮಾಡಿದವರಂತೆ. ಆಮೇಲೆ ಮತ್ತೊಂದು ಕಡೆ ಹರಪ್ಪ ಮಹೆಂಜೋದಾರು  ನಾಗರಿಕ ಸಂಸ್ಕೃತಿಯ ದಿನಮಾನಗಳಲ್ಲಿ ಪಂಚಾಚಾರ್ಯರು ಬದುಕಿದ್ದರಂತೆ. ಮಗದೊಂದು ಕಡೆ ವಿಭಿಷಣನಿಗೆ ಲಿಂಗಧಾರಣೆ ಮಾಡಿದರಂತೆ !! ಮತ್ತೊಂದು ಪರಮಾಶ್ಚರ್ಯದ ಸಂಗತಿಯೆಂದರೆ ಇವರಿಗೆ ತಂದೆ ತಾಯಿಗಳೆ ಇಲ್ಲವಂತೆ. ಯಾಕೆಂದರೆ ಇವರಿಗೆ ಹುಟ್ಟು ಸಾವುಗಳಿಂದ ಅತೀತರಾದ ಲಿಂಗೋದ್ಭವರಂತೆ ! ಇನ್ನೂ  ಸ್ಪಷ್ಟವಾಗಿ ಹೇಳಬೇಕಾದರೆ ತಂದೆ - ತಾಯಿಗಳ ದೈಹಿಕ ಸಂಪರ್ಕ ಇಲ್ಲದೆ ಲಿಂಗದಲ್ಲಿ ಹುಟ್ಟಿದ ಲಿಂಗೋದ್ಭವರಂತೆ ! ಹಿಂಗೆ ಅಂತೆ ಕಂತೆಗಳ ಸಂತೆಯಲ್ಲಿ ಹುಟ್ಟಿದ ಜಗದ್ಗುರುಗಳ ಅಧ್ಯಯನದಲ್ಲಿ ಮಾಡುವುದಾದರೂ ಏನನ್ನೂ ?
    ಪಂಚಾಚಾರ್ಯರ ಹುಟ್ಟೆ ಒಂದು ಪವಾಡ. ಅನಂತರ ಅವರ ಬದುಕಿದ, ಬರೆದರೆಂದು ಹೇಳಲಾಗುವ ಅಸಂಗತ ಸಂಗತಿಗಳು ಇಂದಿಗೂ ಮೂಟೆಗಟ್ಟಲೆ ಪೇರಿಸಿ ಇಟ್ಟು ಎಲ್ಲರನ್ನು ದಿಕ್ಕು ತಪ್ಪಿಸುತ್ತ ಹೊರಟಿದ್ದಾರೆ. ಹದಿನೈದು - ಹದಿನೇಳನೆ ಶತಮಾನದಲ್ಲಿ ರಚಿಸಿರಬಹುದಾದ ಖೊಟ್ಟಿ ಗ್ರಂಥ ಸಿದ್ಧಾಂತ ಶಿಖಾಮಣಿ ಎಂಬ ಪುಸ್ತಕವೆ ಇವರಿಗೆ ಆಧಾರ. ಈ ಕೃತಿಯ ಕುರಿತು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಹಿರೇಮಲ್ಲೂರ ಈಶ್ವರನ್ ಎಂಬ ಭಾಷಾ ತಜ್ಞ , ಇದು ಕೇವಲ ಒಬ್ಬ ವ್ಯಕ್ತಿ ಬರೆದ ಕೃತಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಗದೊಂದು ಚೋದ್ಯದ ಸಂಗತಿಯೆಂದರೆ ಈ ಪಂಚಪೀಠಗಳು ಮೂಲತಃ ಭಿನ್ನ ಭಿನ್ನ ಜನಾಂಗದವರು ಸಂಸ್ಥಾಪಿಸಿದ ಪೀಠಗಳು. ಕಾಲಾನಂತರವಷ್ಟೆ ಅವುಗಳನ್ನೆಲ್ಲ ತಮ್ಮ ಕಬ್ಜಾಕ್ಕೆ ತೆಗೆದುಕೊಂಡ ಜಾತಿ ಜಂಗಮರು ತಮ್ಮ ಹೆಸರಿನಿಂದ ಟೆನೆಂಟ್ ಮಾಡಿಸಿಕೊಂಡಿದ್ದಾರೆ ಅಷ್ಟೆ. ಮೊದ ಮೊದಲು ಚತುರಾಚಾರ್ಯರಾಗಿದ್ದ ಇವರು ಪಂಚಾಚಾರ್ಯರಾದದ್ದೂ ಕೂಡ ತೀರ ಇತ್ತೀಚಿನ ಶತಮಾನಗಳಲ್ಲಿ , ಇದು ಅಂಗೈನೆಲ್ಲಿಯಷ್ಟು ಸ್ಪಷ್ಟವಾಗಿದೆ.
    ಜಟ್ಟಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎಂದು  ಹೇಳುವ ಕಲೆಯನ್ನು ಕರಗತ ಮಾಡಿಕೊಂಡ ಪಂಚಾಚಾರ್ಯರ ಜಗದ್ಗುರು(ಜಾಗದ ಗುರುಗಳು ಅಥರ್ಾರ್ಥ ಗಜದ್ಗುರು)ಗಳು ಲಿಂಗಾಯತರಿಗೆ ನಾವು ಗುರುಗಳು ಎಂದು ಸಾಧಿಸುತ್ತಲೆ ಹೊರಟಿದ್ದಾರೆ. ಹೊಗಲಿ ಇವರು ಬಸವಣ್ಣನವರು ಬೆಳೆದು ಬಿತ್ತಿ ಹೋದ ಆ ಸಂಸ್ಕೃತಿಗೆ ತಕ್ಕುದಾದ ವಿಚಾರಗಳನ್ನು ಹೇಳುತ್ತಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ ? ಬಸವಣ್ಣನವರ ಹಾಗೂ ಅಂದಿನ ಶರಣರ ವಿಚಾರಗಳು ಉತ್ತರವಾದರೆ ಈ ಪಂಚಾಚಾರ್ಯ ಜಗದ್ಗುರುಗಳ ವಿಚಾರಗಳು ದಕ್ಷಿಣ ದಿಕ್ಕಿಗೆ ಕರೆದುಕೊಂಡು ಒಯ್ಯುತ್ತವೆ. ಬಸವಣ್ಣನವರ ವಿಚಾರಧಾರೆ ಇಂದಿನ ಪ್ರಜಾಪ್ರಭುತ್ವದ ಹಾಗೂ ವೈಜ್ಞಾನಿಕ ದಿನಮಾನಗಳಲ್ಲೂ ಪ್ರಸ್ತುತವೆನಿಸಿದರೆ ಈ ಜಗದ್ಗುರುಗಳ ವಿಚಾರಗಳೆಲ್ಲ ಅಸಂಗತ ಹಾಗೂ ಅವೈಜ್ಞಾನಿಕವೆಂದು ಮೇಲು ನೋಟಕ್ಕೆ ಗುರುತಿಸಬಹುದಾಗಿದೆ.
    ಹೀಗೆ ತೀರಾ ಅವೈಜ್ಞಾನಿಕ ಹಾಗೂ ಅಸಂಗತ ಸಂಗತಿಗಳ ಮೇಲೆ ನಿಂತಿರುವ ಜಗದ್ಗುರುಗಳಿಗಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪೀಠವೊಂದನ್ನು ಸಂಸ್ಥಾಪಿಸುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಪ್ರಜಾಪ್ರಭುತ್ವದ ಇಂದಿನ ದಿನಮಾನಗಳಲ್ಲಿ ಅಸಮಾನತೆಯನ್ನು ಪೋಷಿಸಿ ಬೆಳೆಸಿಕೊಂಡು ಹೋಗುವ, ವ್ಯವಸ್ಥೆಯಲ್ಲಿನ ಮೇಲು ಕೀಳುಗಳಿಗೆಲ್ಲ ನಮ್ಮ ಕರ್ಮ- ಪ್ರಾರಬ್ಧವೆ ಕಾರಣ ಎಂದು ಸಾರಿಕೊಂಡು ಹೊರಟಿರುವ ಈ ಸನಾತನಿಗಳಿಗಾಗಿ ಪೀಠವನ್ನು ಸ್ಥಾಪಿಸುವುದೆಂದರೆ ನಾವು ತೋಡಿದ ಖೆಡ್ಡಾದಲ್ಲಿ ನಾವೆ ಬಿದ್ದು ಬಿಟ್ಟಂತೆ.
    ನಾಚಿಕೆ ಎಂಬುದೆ ಇಲ್ಲದ, ಯಾರ್ಯಾರಿಗೋ ತಮ್ಮ ಬುದ್ದಿಯನ್ನು ಭೀಕರಿಗಾಗಿ ಇಟ್ಟಿರುವ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮಾತ್ರ ಒಮ್ಮತದಿಂದ ಸರಕಾರದ ಮೂಲಕ ರಾಜ್ಯಪಾಲರಿಗೆ ಪೀಠ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ ! ಸರಕಾರವೂ ಕೂಡ ಇವರ ವಾದಕ್ಕೆ ತಲೆದೂಗುತ್ತ ತನ್ನ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿಗಳ ಮಂಜೂರಾತಿಯನ್ನೂ ಕೊಟ್ಟಿದೆ !!
    ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿನೆಟ್ ಹಾಗೂ ಸಿಂಡಿಕೇಟ್ ಸದಸ್ಯರು ಅಂದರೆ ಅವರೆಲ್ಲ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಸಮಾಜದ ಸ್ವಾಸ್ಥವನ್ನು ತಮ್ಮ ಬೌದ್ಧಿಕ ಪ್ರೌಢಿಮೆಯ ಮೂಲಕ ಬೆಳೆಸುತ್ತ ಹೊರಡುವವರು ಎಂದೆ ನಂಬಲಾಗಿತ್ತು. ಆದರೆ ಬಿಜೆಪಿಯ ಪುರೋಗಾಮಿ ಸರಕಾರ ಬಂದ ಮೇಲೆ  ಯೋಗ್ಯತೆಯನ್ನು ಪಡೆದವರು ಸಿನೆಟ್- ಸಿಂಡಿಕೇಟ್  ಸದಸ್ಯರಾಗುವುದಕ್ಕಿಂತ ಬಿಜೆಪಿಯನ್ನು ಬೆಂಬಲಿಸುವವರು ವಿಶ್ವವಿದ್ಯಾಲಗಳಲ್ಲಿ ಬಂದು ಕುಂತಿದ್ದಾರೆ. ಇವರೆಲ್ಲರ ಒನ್ ಪಾಯಿಂಟ್ ಪ್ರೋಗ್ರಾಮ್ ಅಂದರೆ ಮತ್ತದೆ ಸನಾತನವಾಗಿರುವ , ಪುರಾತನವೆಂದು ಹೇಳಲಾಗುವ ಹಿಂದೂ ಸಂಸ್ಕೃತಿಯನ್ನು ಹೊಸ ಬಾಟಲಿಯಲ್ಲಿ ಕೊಡುವುದು. ಈ ಮೂಲಕ ಜನಸಾಮಾನ್ಯನ ಮುಗ್ಧ ಮನಸ್ಸುಗಳಲ್ಲಿ ಮತ್ತದೇ ಭೂಜ್ರ್ವತನದ ಬೀಜಗಳನ್ನು ಬಿತ್ತುವುದು. ಈ ಮೂಲಕ ಅವರೆಲ್ಲರನ್ನು ಕುರಿಗಳನ್ನಾಗಿ ಮಾಡುವುದು.
    ನಾವೆಲ್ಲರೂ ಖಂಡಿಸಲೇ ಬೇಕಾದ ಮತ್ತೊಂದು ಸಂಗತಿಯಿದೆ.
    ಶಿವಮೊಗ್ಗ ವಿಶ್ವವಿದ್ಯಾಲಯದ ಹೆಸರು ಕುವೆಂಪು ವಿಶ್ವವಿದ್ಯಾಲಯ. ಕುವೆಂಪು ಅವರಾದರೋ ತಾವು ಬದುಕಿರುವ ಜೀವಿತಾವಧಿಯವರೆಗೆ ವೈಚಾರಿಕರಾಗಿ ಬರೆದು ಬದುಕಿದವರು. ತಮ್ಮ ಸುತ್ತ ಮುತ್ತ ಇದ್ದ ಮೌಢ್ಯವನ್ನು, ಪುರೋಗಾಮಿ ಶಕ್ತಿಗಳು ಆಗಾಗ ಹೇಳುತ್ತ ಬಂದಿರುವ ಪಂಚಾಂಗಗಳನ್ನು, ಜೋತಿಷ್ಯರುಗಳನ್ನು ಅಮೂಲಾಗ್ರವಾಗಿ ತಿರಸ್ಕರಿಸಿದವರು. ರಾಹುಕಾಲ ಗುಳಿಕಾಲ ನೋಡುತ್ತ ಮನೆ ಬಿಟ್ಟು ಹೊರಗೆ ಬರುವ ಎಷ್ಟೋ ಜನ ವಿಶ್ವವಿದ್ಯಾಲಯಗಳ ಪ್ರೊಫೆಸರ್ಗಳನ್ನೆ ತರಾಟೆಗೆ ತೆಗೆದುಕೊಂಡವರು.ರಾಷ್ಟ್ರಕ್ಕೆ ಮಾರ್ಗದರ್ಶಕರಾಗಬೇಕಿರುವ, ಸಮಾಜದ ರೋಗ ರುಜಿನಿಗಳಿಗೆ ಮದ್ದೆರೆಯಬೇಕಾಗಿರುವ, ಸತ್ಯಾನ್ವೇಷಣೆಯೆ ಜೀವನಧ್ಯೇಹವಾಗಬೇಕಿರುವ ಸಾಹಿತಿಗಳು, ವಿಶ್ವವಿದ್ಯಾಲಯದ   ಪ್ರೊಫೆಸರ್ಗಳು ಸರಕಾರದ ಸತ್ತೆಗೆ ಎಂದೂ ತಲೆಬಾಗಬೇಕಿಲ್ಲ ಎಂದು ತಿಳಿಸುತ್ತಾರೆ. ರಾಜ್ಯದಲ್ಲಿ ರಾಜಪ್ರಭುತ್ವ ಅಧಿಕಾರದಲ್ಲಿದ್ದ ದಿನಗಳಲ್ಲಿಯೆ ಅವರು ಕವಿಗರಸು ಗಿರಸುಗಳ ಋಣವಿಲ್ಲ ; ಅವನಗ್ನಿ ಮುಖಿ, ಪ್ರಲಯಶಿಖಿ ಎಂದವರು ಗುಡುಗುತ್ತಾರೆ.
    ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂಬ ತಮ್ಮ ಒಂದು ಉಪನ್ಯಾಸದಲ್ಲಿ ಯುವಕರು ನಿರಂಕುಶ ಮತಿಗಳಾಗಬೇಕು... ಮತಿ ಮಾನವನ ಸವರ್ೊತಕೃಷ್ಟ ಆಯುಧ... ಮಾಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗ ನರಕ ದೇವಾನುದೇವತೆಗಳ ಮೋಹಮಾಹೆಗಳಿಂದಲೂ ಅದು ಸತ್ವರಹಿತವಾಗಿದೆ ; ಕಾಂತಿ ಹೀನವಾಗಿದೆ. ಚಕ್ರವತರ್ಿಯಂತೆ ಸಿಂಹಾಸನದಲ್ಲಿ ಮಂಡಿಸಬೇಕಾದುದು ತೊತ್ತಾಗಿ ಕಾಲೊತ್ತಬೇಕಾಗಿದೆ. ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೆ ನಿಸ್ತೇಜವಾಗಿದೆ ಎಂದು ನುಡಿದು ಮತಿಯೊಂದೇ ಮಾನವನ ಬೆಳಕು ; ಅದಿಲ್ಲದವ ಮನುಷ್ಯನಾಗಲು ಸಾಧ್ಯವಿಲ್ಲ. ಅದು ವಿಚಾರಗಳೆ ಇಲ್ಲದೆ ಜಡವಸ್ತು ಮಾತ್ರ ಆಗಬಲ್ಲುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.
    ಮತ ನಮಗೊಂದು ದೊಡ್ಡ ಬಂಧನವಾಗಿದೆ ; ನಾಡಿನ ಏಳ್ಗೆಗೆ ಕುತ್ತಿಗೆ ಉರುಳಾಗಿದೆ. ಪರಮಶಾಂತಿಯೂ ಪರಮಾನಂದವೂ ಆಗಿರುವ ಪರಮೇಶ್ವರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೇ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರೊನೊಬ್ಬರು ಮುಟ್ಟದಿರುವುದು, ನೋಡದಿರುವುದು ; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು ; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು , ಕೆಲವರನ್ನು ಸಾರ್ವಜನಿಕವಾದ ಬಾವಿ ಕರೆಗಳಲ್ಲಿ ನೀರು ತೆಗೆದುಕೊಳ್ಳುವಂತೆ ಮಾಡುವುದು ; ಕೆಲವರನ್ನು ದೇವಸ್ಥಾನಗಳಿಗೆ ಸೇರಿಸದಿರುವುದು... ಇತ್ಯಾದಿ ಮತಾಚರಣೆಗಳನ್ನವರು ಖಂಡಿಸುತ್ತಾರೆ.
    ಈ ಪಂಚಾಚಾರ್ಯರ ಜಗದ್ಗುರುಗಳಾದರೋ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ಇವತ್ತಿನ ದಿನಮಾನಗಳಲ್ಲೂ ಅಡ್ಡಪಲ್ಲಕ್ಕಿಯ ಜೀವವಿರೋಧಿ ಕೃತ್ಯಗಳಲ್ಲಿ ವಿರಾಜಮಾನರಾಗುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಲೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿಕೊಂಡು ಬರುತ್ತಾರೆ. ತಾವು ಬಂಗಾರದ ಕಿರೀಟ ಧರಿಸಿ,ಭವ್ಯವಾದ ಮೆರವಣಿಗೆ ಹೊರಟರೆ ತಮ್ಮ ಅನುಯಾಯಿಗಳ ಬಾಳೂ ಬಂಗಾರವಾಗುತ್ತದೆ ಎಂದು ಭ್ರಮಿಸುತ್ತಾರೆ. ತಮ್ಮ ಬಲಗೈಯನ್ನು ಮೇಲೆತ್ತಿ ಆಶರ್ೀವಾದ ಮಾಡಿದರೆ ತಮ್ಮ ಶಿಷ್ಯನಿಗೆ ಒಳ್ಳೆಯದಾಗುತ್ತದೆ, ಬದಲಾಗಿ ಮನಸ್ಸಿನಲ್ಲಿಯೆ ಆ ಶಿಷ್ಯನನ್ನು ಹಳಿದರೆ ಕೆಟ್ಟದ್ದು ಘಟಿಸುತ್ತದೆ ಎಂದು ವಿವರಿಸುತ್ತಾರೆ. ತಾವು ಗುರುಗಳಾದ್ದರಿಂದ ಎಲ್ಲರಿಗಿಂತಲೂ ಒಂದು ಫೀಟೋ - ಎರಡು ಫೀಟೋ ಎತ್ತರದ ಸಿಂಹಾಸನವೇ ಬೇಕೆಂದು ಹಂಬಲಿಸುತ್ತಾರೆ. ಇಂದಿನ ಪ್ರಜಾಪ್ರಭುತ್ವದ ದಿನಗಳಲ್ಲಿಯೂ ರಾಜ್ಯಪಾಲರೆ ಇರಲಿ ರಾಷ್ಟ್ರಪತಿಗಳೆ ಇರಲಿ ಅವರೆಲ್ಲರಿಗಿಂತಲೂ ತಾವು ಹೆಚ್ಚು ಎಂದೆ ಭ್ರಮಿಸಿಕೊಂಡು ಭ್ರಮಾಲೋಕದಲ್ಲಿದ್ದಾರೆ.
    ಹೀಗೆ ತೀರಾ ಅವೈಜ್ಞಾನಿಕ ಮನೋಭಾವದ, ಮಾನವ ಹಕ್ಕುಗಳ ಉಲ್ಲಂಘಿಸುತ್ತ ನಡೆದಿರುವ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳಿರುವ ದಲಿತರ- ದಮನಿತರ ಶೋಷಣೆಯೆ ತಮ್ಮ ಗುರಿಯೆಂದು ಸಾರಿಕೊಂಡು ಬಂದಿರುವ ಜಗದ್ಗುರುಗಳ ಪೀಠವನ್ನು ಅದೂ ಕುವೆಂಪು ವಿಶ್ವವಿದ್ಯಾಲಯದ ಮೂಲಕ ಸ್ಥಾಪಿಸುವುದೆಂದರೆ ಒಂದೆ ಏಟಿಗೆ ಕುವೆಂಪು ಹಾಗೂ ಪ್ರಜಾಪ್ರಭುತ್ವ ತತ್ವಗಳಿಗೆ ಎಳ್ಳು ನೀರು ಬಿಟ್ಟಂತೆ ಎಂದೆ ಅರ್ಥ.
    ಯಾವ ಕಾಲದ ಶಾಶ್ತ್ರವೇನು ಹೇಳಿದರೇನು ?
    ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
    ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ಎಂಬ ಕುವೆಂಪು ವಾಕ್ಯವನ್ನು ಮತ್ತೆ ಮತ್ತೆ ನೆನಪಿಸುತ್ತ, ಮನುವಿನ ಮೊಮ್ಮಕ್ಕಳಾದ ಜಗದ್ಗುರುಗಳ ಪೀಠ ಸ್ಥಾಪನೆಯನ್ನು ರಾಜ್ಯಪಾಲರು ತಿರಸ್ಕರಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ ಮಾಡಲೇಬೇಕಾಗಿದೆ. ಮತಮೌಢ್ಯ, ಕುರುಡು ನಂಬಿಕೆಯನ್ನು ಇತ್ಯಾದಿಯನ್ನು ಪರಿಪೋಷಿಸುವುದು ಬೆಳೆಸುವುದು,   ಘೋರ ಅಪರಾಧವೆಂದು ನಮ್ಮ ಸಂವಿಧಾನದ 51/1 ಎಂಬ ಪರಿಚ್ಚೇದ ಹೇಳುತ್ತದೆ. ಇದನ್ನಾದರೂ ನಮ್ಮ ರಾಜ್ಯಪಾಲರು ತಮ್ಮ ಗಮನಕ್ಕೆ ತಂದುಕೊಳ್ಳುವರೆ ಕಾದು ನೋಡಬೇಕು.
0 ವಿಶ್ವಾರಾಧ್ಯ ಸತ್ಯಂಪೇಟೆ
satyampet1969@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ